ಪರಶುರಾಮ ಭಾವು ಪಟವರ್ಧನ -
ಪೇಶ್ವೆಯವರ ಕಾಲದಲ್ಲಿದ್ದ ಒಬ್ಬ ಪ್ರಮುಖ ಸೇನಾಧಿಪತಿ. ತಾಸಗಾಂವ ಇವನ ಅನುವಂಶಿಕ ಜಹಗೀರು.

	1770ರಲ್ಲಿ ಹೈದರ್ ಅಲಿಯನ್ನು ತಗ್ಗಿಸಲು ಪೇಶ್ವೆ 1ನೆಯ ಮಾಧವರಾಯ ಗೋಪಾಲರಾವ್ ಪಟವರ್ಧನ ಎಂಬುವವನ ನೇತೃತ್ವದಲ್ಲಿ ಕಳಿಸಿದ ಸೈನ್ಯದಲ್ಲಿ ಪರಶುರಾಮ ಭಾವು ಒಬ್ಬ ಸೈನ್ಯಾಧಿಕಾರಿಯಾಗಿದ್ದ. 1772ರಲ್ಲಿ 1ನೆಯ ಮಾಧವರಾಯ ಮೃತನಾಗಿ ಅವನ ತಮ್ಮ ನಾರಾಯಣರಾಯ ಪೇಶ್ವೆಯಾದ. ಕೆಲವು ದಿನಗಳಲ್ಲಿ ಇವನ ಕೊಲೆಯಾಯಿತು. ರಘುನಾಥರಾಯ ಆ ಪದವಿಯನ್ನು ಪಡೆದ. ಅವನು ಆ ಸ್ಥಾನದಲ್ಲಿ ಬಹುಕಾಲ ನಿಲ್ಲಲಿಲ್ಲ. ನಾರಾಯಣರಾಯನ ಹೆಂಡತಿ ಗಂಗಾಬಾಯಿಗೆ ಅವನ ಮರಣೋತ್ತರ ಕಾಲದಲ್ಲಿ ಜನಿಸಿದ ಮಾಧವರಾಯನನ್ನು ಚಿಕ್ಕ ಮಯಸ್ಸಿನಲ್ಲೇ ಪೇಶ್ವೆಯಾಗಿ ಮಾಡಲಾಯಿತು. ರಘುನಾಥರಾಯ ಮುಖ್ಯಮಂತ್ರಿಯಾಗಿ ಉಳಿದ. ಇಂಥ ಗೊಂದಲದ ಪರಿಸ್ಥಿತಿಯಲ್ಲಿ ಹೈದರ್ ಅಲಿ ಮರಾಠಿಗರಿಗೆ ಸೇರಿದ ಪ್ರದೇಶಗಳ ಮೇಲೆ ಆಕ್ರಮಣ ಮಾಡತೊಡಗಿದ. ಅವನನ್ನು ನಿರ್ಬಂಧಿಸಲು ಪರಶುರಾಮ ಭಾವು ಅವನ ಮೇಲೆ ದಂಡೆತ್ತಿಹೋದ. ಆದರೆ ಕಾರಣಾಂತರಗಳಿಂದ ಅವನು ಯುದ್ಧಮಾಡದೆ ಹಿಂದಿರುಗಬೇಕಾಯಿತು.

	ಮುಂದೆ 1780ರಲ್ಲಿ ಇಂಗ್ಲಿಷರ ಸೈನ್ಯ ಜನರಲ್ ಗೊಡಾರ್ಡನ ನೇತೃತ್ವದಲ್ಲಿ ವಸಯಿ ಕೋಟೆಯನ್ನು ಮುತ್ತಲೆಳಸಿದಾಗ ಮತ್ತು 1781ರಲ್ಲಿ ಅವನೇ ಪುಣೆಯ ಕಡೆಗೆ ದಂಡೆತ್ತಿ ಸಾಗಿದಾಗ ನಾನಾ ಫದ್ನವೀಸ ಪರಶುರಾಮ ಭಾವುನನ್ನು ಸೈನ್ಯದೊಂದಿಗೆ ಕಳಿಸಿದ. ತೋರಣದ ಗುಡ್ಡಗಾಡಿನ ಪ್ರದೇಶದಲ್ಲಿ ಪರುಶರಾಮ ಇಂಗ್ಲಿಷ್ ಸೈನ್ಯವನ್ನು ಎದುರಿಸಿ ಅವರನ್ನು ಕಂಗೆಡಿಸಿದ. 1784ರಲ್ಲಿ ನರಗುಂದ ದೇಸಗತಿಯ ಸಂಬಂಧವಾಗಿ ಮರಾಠಿಗೂ ಟೀಪುಸುಲ್ತಾನನಿಗೂ ವಿರಸ ಉಂಟಾದಗಲೂ ಪರಶುರಾಮನೇ ಸೈನ್ಯದೊಂದಿಗೆ ಹೋಗಿ ಟೀಪುವಿನ ಸೈನ್ಯವನ್ನು ಸೋಲಿಸಿದ. ಮತ್ತೆ 1790ರಲ್ಲ ಹೈದರಾಬಾದಿನ ನಿಜಾಮ್ ಅಲಿ, ಮರಾಠರು ಮತ್ತು ಇಂಗ್ಲಿಷರು ಒಪ್ಪಂದ ಮಾಡಿಕೊಂಡು ಟೀಪುವಿನ ಮೇಲೆ ದಂಡೆತ್ತಿ ಸಾಗಿದಾಗ ಧಾರವಾಡ, ನಿಜಗಲ್ ಮೊದಲಾದ ಕೋಟೆಗಳನ್ನು ವಶಪಡಿಸಿಕೊಂಡು ಬೈಂದೂರಿನ ಕೋಟೆಯನ್ನು ಜಯಿಸಲೆಳಸಿ ಆ ಕಡೆಗೆ ಸಾಗಿದ. ಆದರೆ ಅದು ಸಾಧ್ಯವಾಗದೆ ಹಿಂದಿರುಗಬೇಕಾಯಿತು.

1795ರಲ್ಲಿ ಮರಾಠರಿಗೂ ನಿಜಾಮ್ ಆಲಿಗೂ ಖರ್ದಾದಲ್ಲಿ ಘೋರವಾದ ಯುದ್ಧವಾಗಿ ಮರಾಠರಿಗೆ ಜಯವಾಯಿತು. ಆಗಲೂ ಪರಶುರಾಮ ಭಾವುವೇ ಮರಾಠಾ ಸೈನ್ಯದ ಮುಖಂಡನಾಗಿದ್ದ. ಅದೇ ವರ್ಷ ಅಕ್ಟೋಬರಿನಲ್ಲಿ ಪೇಶ್ವೆ ಆತ್ಮಹತ್ಯೆ ಮಾಡಿಕೊಂಡಾಗ ಪುಣೆಯಲ್ಲಿ ಮತ್ತೆ ಒಳಸಂಚುಗಳು ನಡೆದುವು. ಪೇಶ್ವೆಯ ಹೆಂಡತಿ ಯಶೋದಾಬಾಯಿ ಒಬ್ಬನನ್ನು ದತ್ತು ತೆಗೆದುಕೊಳ್ಳಬೇಕೆಂದೂ ಆ ದತ್ತಕ ಮಗ ಮುಂದಿನ ಪೇಶ್ವೆಯಾಗಬೇಕೆಂದೂ ನಾನಾ ಫಡ್ನವೀಸ್ ಸೂಚಿಸಿದ. ಆದರೆ ಇದೆ ಹೊತ್ತಿಗೆ ರಘುನಾಥರಾಯ ಒಳಸಂಚು ನಡಿಸಿ ತಾನೇ ಪೇಶ್ವೆಯಾದ.

	ಅಲ್ಲಿಯವರೆಗೆ ಪರಶುರಾಮ ಭಾವು ನಾನಾ ಫಡ್ನವೀಸನ ಆಪ್ತಸಚಿವನಂತಿದ್ದ. ಆದರೆ ಅನಂತರ ಅವರ ನಡುವೆ ವಿರಸವುಂಟಾಗತೊಡಗಿತು. ಅಷ್ಟರಲ್ಲಿ ಇನ್ನೊಂದು ಒಳಸಂಚಿನ ಫಲವಾಗಿ ಬಾಜೀರಾಯ ಪೇಶ್ವೆ ಪದವಿಯಿಂದ ಇಳಿಯಬೇಕಾಯಿತು. ಅವನ ತಮ್ಮ ಚಮಣಾಜಿ ಅಪ್ಪಾನನ್ನು ಪೇಶ್ವೆಯ ಗಾದಿಯ ಮೇಲೆ ಕೂಡಿಸಿ ಪರಶುರಾಮ ಭಾವು ಮಂತ್ರಿಯಾದ. ಈ ವ್ಯವಸ್ಥೆಯೂ ಬಹುಕಾಲ ನಿಲ್ಲಲಿಲ್ಲ. ಪೇಶ್ವೆಯ ಪದವಿಯನ್ನು ಪಡೆಯಲು ಬಾಜೀರಾಯ ಮತ್ತೆ ಮತ್ತೆ ಯತ್ನಿಸಿ ಯಶಸ್ವಿಯಾದ. ಪರಶುರಾಮ ಭಾವು ಬಂಧನಕ್ಕೆ ಒಳಗಾದ, ಅವನ ಜಹಗೀರಿಯನ್ನು ಕಸಿದುಕೊಳ್ಳಲಾಯಿತು. ಬಾಜೀರಾಯ ನಾನಾ ಫಡ್ನವೀಸನನ್ನೂ ಹತ್ತಿಕ್ಕಲೆಳೆಸಿದ. ಆ ಗೊಂದಲದಲ್ಲಿ ಪರಶುರಾಮನ ಬಿಡುಗಡೆಯಾಯಿತು. ಇವನಿಗೆ ಧಾರವಾಡ ಮತ್ತು ಇತರ ಪ್ರದೇಶಗಳ ಜಹಗೀರಿಯನ್ನು ಕೊಡಲಾಯಿತು. ಇವನ ಮತ್ತು ನಾನಾಫಡ್ನವೀಸನ ನಡುವಣ ಸಂಬಂಧ ಸುಧಾರಿಸಿತು. ಬ್ರಿಟಿಷರು ಟೀಪುವಿನೊಡನೆ ಯುದ್ಧಮಾಡುವಾಗ ಅವರಿಗೆ ಸಹಾಯ ಮಾಡುವುದಾಗಿ 1798ರಲ್ಲಿ ನಾನಾಫಡ್ನವೀಸ ಮಾತುಕೊಟ್ಟ. ಆಗಲೂ ಪರಶುರಾಮ ಭಾವು ಸೇನಾಧಿಪತಿಯಾಗಿ ನೇಮಕ ಹೊಂದಿದ. ಆದರೆ ಬಾಜೀರಾಯನ ತಂತ್ರ ಮತ್ತು ವಿಳಂಬನೀತಿಯಿಂದಾಗಿ ಅವನು ಆ ಯುದ್ಧಕ್ಕೆ ಹೋಗುವ ಪ್ರಸಂಗ ಒದಗಲಿಲ್ಲ. ಅದಕ್ಕೆ ಬದಲಾಗಿ ಮುಂದೆ ಕೊಲ್ಲಾಪುರದ ಅರಸನನ್ನು ಹತ್ತಿಕ್ಕಲು ಪರಶುರಾಮನನ್ನು ಕಳುಹಿಲಾಯಿತು. ಅವನು ಆ ಕದನದಲ್ಲಿ ಗಾಯಕೊಂಡು ಮೃತನಾದ (1799).

	ಪರಶುರಾಮ ಭಾವುಗೆ ಅಪ್ಪಾಸಾಹೇಬ ಎಂಬ ಮಗನಿದ್ದ. ಅವನೂ ತಂದೆಯೊಡನೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ. ತಂದೆಯ ಮರಣದ ಅನಂತರ ಅವನ ಕೊಲ್ಲಾಪುರದ ಅರಸನ ವಿರುದ್ಧ ಯುದ್ಧವನ್ನು ಮುಂದುವರಿಸಿದ.         (ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ